ಕೃಷಿ

ಹೆಚ್ಚು ಆದಾಯಕೊಡುವ ಮಿಶ್ರ ಬೇಸಾಯ ಮಾಡುವುದು ಹೇಗೆ..?

ನಮ್ಮ ದೇಶ ಕೃಷಿ ಪ್ರಧಾನವಾದರೂ ರೈತರ ಸಮಸ್ಯೆಗಳು ಎಂದಿನಿಂದಲೂ ಹಾಗೆಯೇ ಇವೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಇನ್ನೂ ಬಡವರಾಗಿಯೇ ಇದ್ದಾರೆ. ಸಾಲದ ಹೊರೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದಕ್ಕೆ ಕಾರಣ ರಾಸಾಯನಿಕಗಳನ್ನು ಆಧರಿಸಿದ ಕೃಷಿ ಒಂದೆಡೆಯಾದರೆ, ಅತಿ ಚಿಕ್ಕ ಜಮೀನು, ನೀರಿಗಾಗಿ ಮಳೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಮುಂತಾದವು ಸಹ ಬಹುಮುಖ್ಯವಾಗಿವೆ.

ಈ ಸಂದರ್ಭದಲ್ಲಿ ರೈತರಿಗಿರುವ ಒಂದೇ ಒಂದು ಮಾರ್ಗವೆಂದರೆ, ಮಿಶ್ರ ಬೇಸಾಯ ಪದ್ಧತಿಗೆ ಅಣಿಯಾಗುವುದು.ಮಿಶ್ರ ಬೇಸಾಯವೆಂದರೆ ಕೃಷಿ ಜೊತೆಗೆ ಕೃಷಿಯೇತರ, ಚಟುವಟಿಕೆಗಳನ್ನೂ ಕೈಗೊಳ್ಳುವುದು. ಅವುಗಳಲ್ಲಿ ಹೈನುಗಾರಿಕೆ, ಕೋಳಿ-ಕುರಿ ಸಾಕಾಣಿಕೆ, ಜೇನು-ರೇಷ್ಮೆ ಕೃಷಿ, ತೋಟಗಾರಿಕೆ ಮುಂತಾದವು.

ಸಾಮಾನ್ಯವಾಗಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೃಷಿ ಕಾರ್ಯಗಳನ್ನು ಮಾಡಲು ಸಿಗುವ ಅವಧಿ ಮುಂಗಾರು ಮಳೆ ಮುಗಿಯುವವರೆಗೆ ಮಾತ್ರ. ಹೆಚ್ಚೆಂದರೆ ನಾಲ್ಕು ತಿಂಗಳು. ಉಳಿದ ವೇಳೆ ಅಂದರೆ ಸುಮಾರು ಎಂಟು ತಿಂಗಳು ಅವರಿಗೆ ನಿಯಮಿತ ಕೆಲಸ ಕಾರ್ಯಗಳಿರಲಾರದು.

ಆ ಸಂದರ್ಭದಲ್ಲಿ ಅವರು ತಮ್ಮ ಅನುಕೂಲ ಹಾಗೂ ಆಸಕ್ತಿಗನುಗುಣವಾಗಿ ಯಾವುದಾದರೂ ಕೃಷಿಯೇತರ ಅಂದರೆ, ಕೃಷಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬಹುದು. ಅದರಲ್ಲೂ ಇತ್ತೀಚೆಗೆ ಹೈನುಗಾರಿಕೆಗೆ ತುಂಬಾ ಬೇಡಿಕೆಯಿದೆ.

ಆಸಕ್ತಿಯುಳ್ಳ ರೈತರು ಆಕಳು ಅಥವಾ ಎಮ್ಮೆಗಳನ್ನು ಸಾಕಬಹುದು.ಈಗ ಅಂತಹ ಉದ್ಯೋಗ ಮಾಡುವವರಿಗೆ ಸಬ್ಸಿಡಿ ಸಹಿತ ಸಾಲವನ್ನು ಅತಿ ಕಡಿಮೆ ಬಡ್ಡಿದರದಲ್ಲಿ ಒದಗಿಸುವ ಯೋಜನೆಗಳೂ ಇರುವುದರಿಂದ ಸಣ್ಣ ರೈತರೂ ಈ ಆಲೋಚನೆ ಮಾಡಬಹುದು. ಆರಂಭದಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದಿಷ್ಟು ಹಸುಗಳನ್ನು ಪೋಷಿಸಬಹುದು.

ಆಮೇಲೆ ಬೇಡಿಕೆಗೆ ಅನುಗುಣವಾಗಿ ವಿಸ್ತರಿಸಿಕೊಳ್ಳಬಹುದು. ಹೈನುಗಾರಿಕೆ ಕೃಷಿಗೆ ಪೂರಕವಾಗಿರುವುದರಿಂದ ರೈತರಿಗೆ ಬಹಳಷ್ಟು ಅನುಕೂಲಗಳಿವೆ. ಹೈನುಗಾರಿಕೆಯಿಂದ ದೊರೆಯುವ ಸಗಣಿಯಿಂದ ಸಾವಯವ ಗೊಬ್ಬರ ತಯಾರಿಸಿ ಕೃಷಿಗೆ ಬಳಸಬಹುದು. ಹಾಗೆಯೇ ಕೃಷಿಕಾರ್ಯಗಳಿಂದ ದೊರೆಯುವ ಹುಲ್ಲು ಮತ್ತು ಇತರೆ ವಸ್ತುಗಳನ್ನು ಜಾನುವಾರುಗಳಿಗೆ ಮೇವಿನಂತೆ ಬಳಸಬಹುದು.

ತೋಟಗಾರಿಕೆ ಬೆಳೆಗಳಿಗೆ ಆದ್ಯತೆ.ರೈತರು ತೋಟಗಾರಿಕೆ ಬೆಳೆಗಳ ಕುರಿತು ವಿಚಾರ ಮಾಡಬಹುದು. ಅದರಲ್ಲೂ ಮಾವು, ತೆಂಗು, ಬಾಳೆ ಮುಂತಾದವು. ಅವು ಕೂಡ ಆದಾಯ ತರುವ ಬೆಳೆಗಳೇ. ಆದರೆ ಸೂಕ್ತವಾದ ಪದ್ಧತಿ ಅನುಸರಿಸುವುದು ಅಗತ್ಯ. ಕೆಲಸ ಸುಲಭವಾಗಬೇಕೆಂದು ಸಾಕಷ್ಟು ರೈತರು ಬೆಳೆಗಳಿಗೆ ರಾಸಾಯನಿಕ ಅಂಶಗಳನ್ನು ತಂದು ಸುರಿಯುತ್ತಾರೆ.

ಬದಲಾಗಿ, ಸಾವಯವ ಮಾದರಿಯಲ್ಲೇ ಬೆಳೆದರೆ ಬೆಳೆಗಾರನಿಗೆ ಧೀರ್ಘಕಾಲದಲ್ಲಿ ಅನುಕೂಲವಾಗುತ್ತದೆ.ಭೂಮಿಯೂ ಸುರಕ್ಷಿತವಾಗಿರುತ್ತದೆ. ಅಷ್ಟೇ ಅಲ್ಲದೇ ರಾಸಾಯನಿಕ ಮುಕ್ತವಾಗಿದ್ದರೆ ಮಾತ್ರ ಹಣ್ಣುಗಳು ರಫ್ತಿಗೆ ಯೋಗ್ಯವಾಗುತ್ತವೆ. ಮಾವು ಬೆಳೆಯ ರಫ್ತು ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗಿರುವುದು ಹೆಚ್ಚು ಹೆಚ್ಚು ರಾಸಾಯನಿಕ ಸುರಿಯುವ ರೈತರ ಅಭ್ಯಾಸದಿಂದಾಗಿ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಅಣಬೆ ಕೃಷಿ ಕೂಡ ಲಾಭದಾಯಕ ಎನಿಸಿದೆ. ಇಂದಿನ ದಿನಗಳಲ್ಲಿ ಮಾಂಸದ ಉಪಯೋಗ ಕೂಡ ಹೆಚ್ಚಾಗಿರುವುದರಿಂದ ಬಿಡುವಿನ ದಿನಗಳಲ್ಲಿ ರೈತರು ಕೋಳಿ ಹಾಗೂ ಕುರಿ ಸಾಕಾಣಿಕೆಗೂ ಮಹತ್ವ ನೀಡಬಹುದು. ಆಸಕ್ತಿಯಿರುವ ರೈತರು ಹೂವಿನ ಕೃಷಿಯನ್ನು ಮಾಡಿಯೂ ಆದಾಯ ಹೆಚ್ಚಿಸಿಕೊಳ್ಳಬಹುದು.ಮಿಶ್ರಬೆಳೆಯ ಲಾಭಗಳುಮಿಶ್ರಬೆಳೆಯಿಂದ ದೇಶಕ್ಕೂ ಅನುಕೂಲ. ರೈತರ ಆದಾಯದಲ್ಲಿ ಗಣನೀಯ ಹೆಚ್ಚಳ ಹಾಗೂ ಜೀವನಮಟ್ಟ ಸುಧಾರಣೆ, ನಿರುದ್ಯೋಗ ಸಮಸ್ಯೆ ಇಳಿಕೆಯಾಗಿ, ಬಂಡವಾಳದ ಶೇಖರಣೆ ಹೆಚ್ಚಳವಾಗುತ್ತದೆ.

ಉಳಿತಾಯದಲ್ಲಿ ಪ್ರಗತಿ ಸಾಧ್ಯವಾಗಿ, ಆರ್ಥಿಕ ಅಭಿವೃದ್ಧಿ ದರ ಹೆಚ್ಚುತ್ತದೆ. ರೈತರ ಆದಾಯ ಹೆಚ್ಚಳವಾದ ಹಾಗೆ ವಸ್ತುಗಳ ಬೇಡಿಕೆಯೂ ಹೆಚ್ಚಾಗುವುದರಿಂದ ಅಂತಹ ವಸ್ತು, ಸೇವೆಗಳ ಉತ್ಪಾದನೆ ಏರುತ್ತದೆ. ದೇಶದ ಒಟ್ಟಾರೆ ಜಿಡಿಪಿ ಗಣನೀಯ ಪ್ರಗತಿ ಆಗುವುದರಲ್ಲಿ ಸಂದೇಹವಿಲ್ಲ.ಒಂದು ಬೆಳೆಯಲ್ಲಿ ಲಾಭವಾಗದಿದ್ದರೆ ಇನ್ನೊಂದು ತೋಟಗಾರಿಕೆ ಬೆಳೆಯೋ, ಉದ್ಯೋಗವೋ ಕೈ ಹಿಡಿಯುತ್ತದೆ.

ಒಟ್ಟಿನಲ್ಲಿ, ರೈತನಿಗೆ ನಷ್ಟ ಅಥವಾ ಹಿನ್ನಡೆಯ ಮಾತೇ ಇಲ್ಲ. ಇದು ಮಿಶ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಬಹುದು. ನಮ್ಮ ದೇಶದ ಕೃಷಿ ಕ್ಷೇತ್ರವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಇದುವೇ ಪರಿಹಾರವಾಗಬಲ್ಲದು.

ಸಂಗ್ರಹ ಮಾಹಿತಿ

Back to top button
error: Content is protected !!
Close
Close